ವಿಯಟ್ನಾಮ್
	ಆಗ್ನೇಯ ಏಷ್ಯದಲ್ಲಿರುವ ಒಂದು ಸರ್ವತಂತ್ರ ಸ್ವತಂತ್ರ ದೇಶ. ಸಂಕ್ರಾಂತಿ ವೃತ್ತದ ಉಷ್ಣವಲಯದಲ್ಲಿರುವ ಈ ದೇಶ ಸಮಾಜವಾದಿ ಗಣರಾಜ್ಯ. ಇದರ ಪಶ್ಚಿಮದಲ್ಲಿ ಲಾವೋಸ್ ಮತ್ತು ಕಾಂಬೋಡಿಯ, ಉತ್ತರದಲ್ಲಿ ಚೀನ, ಪೂರ್ವದಲ್ಲಿ ದಕ್ಷಿಣಚೀನ ಸಮುದ್ರ ಇವೆ. ಹಾನಾಯ್ ರಾಜಧಾನಿ. ಹೋಚಿಮಿನ್ ಸಿಟಿ, ಹೈಫಾಂಗ್, ಹ್ಯೂ ಇತರ ನಗರಗಳು. ಉತ್ತರ ದಕ್ಷಿಣವಾಗಿ 1657 ಕಿಮೀ, ಪೂರ್ವ ಪಶ್ಚಿಮವಾಗಿ 612 ಕಿಮೀ ಇರುವ ಈ ದೇಶಕ್ಕೆ 3,444 ಕಿಮೀ ತೀರಪ್ರದೇಶವಿದೆ. ಒಟ್ಟು ವಿಸ್ತೀರ್ಣ 331,689 ಚ.ಕಿಮೀ. ಜನಸಂಖ್ಯೆ 8,26,48,000.ಭಾಷೆಗಳು: ವಿಯಟ್ನಾಮೀ, ಫ್ರೆಂಚ್, ಇಂಗ್ಲಿಷ್, ಚೀನಿ. ಸಾಕ್ಷರತೆ: ಸೇ. 94. ಧರ್ಮಗಳು: ತಾವೊಮಾರ್ಗ, ಬೌದ್ಧಧರ್ಮ, ಕನ್ಫೂಷಿಯನ್, ಕ್ರೈಸ್ತಧರ್ಮ, ಇಸ್ಲಾಮ್. ನಾಣ್ಯ: ಡಾಂಗ್. 

	ಚೀನದ ದಕ್ಷಿಣ ತುದಿಯಿಂದ ಥಾಯ್ಲೆಂಡಿನ ಕೊಲ್ಲಿಯವರೆಗೆ, ಲಾವೋಸ್‍ನಿಂದ ಟಾನ್‍ಕಿನ್ ಖಾರಿಯವರೆಗೆ ಹರಡಿರುವ ವಿಯಟ್ನಾಮನ್ನು ಉತ್ತರದ ಪ್ರಸ್ಥಭೂಮಿ, ರೆಡ್‍ನದಿಯ ಮುಖಜಭೂಮಿ, ಅನ್ನಮೈಟ್ ಪರ್ವತ ಶ್ರೇಣಿಪ್ರದೇಶ, ತೀರದ ತಗ್ಗು ಪ್ರದೇಶ ಮತ್ತು ಮೆಕಾಂಗ್ ನದಿ ಮುಖಜಭೂಪ್ರದೇಶವೆಂದು ಐದು ಭಾಗಗಳಾಗಿ ಗುರುತಿಸಲಾಗುತ್ತದೆ. ಉತ್ತರದ ಪ್ರಸ್ಥಭೂಮಿ ಕಾಡುಗಳಿಂದ ಕೂಡಿರುವ ಪರ್ವತಾರಣ್ಯ ಪ್ರದೇಶ. ವಿಯಟ್ನಾಮಿನ ಬಹು ಎತ್ತರದ ಪ್ರದೇಶ ಇಲ್ಲಿನ ಫಾನ್ ಸಿ ಪಾನ್ ಪರ್ವತ ಶಿಖರ 3,143 ಮೀ ಎತ್ತರವಿದೆ. ಅನ್ನಮೈಟ್ ಪರ್ವತ ಶ್ರೇಣಿ ವಾಯವ್ಯ ವಿಯಟ್ನಾಮಿನಿಂದ ಹೋಚಿಮಿನ್ ನಗರಕ್ಕೆ ಉತ್ತರದಲ್ಲಿ 80 ಕಿಮೀ ಅಂತರದವರೆಗೆ ಹಬ್ಬಿದೆ. ವಿಯಟ್ನಾಮಿನಲ್ಲಿ ಹರಿಯುವ ಅನೇಕ ನದಿಗಳಲ್ಲಿ ದಕ್ಷಿಣ ಚೀನದಿಂದ ಹರಿದು ಬರುವ ಉತ್ತರ ವಿಯಟ್ನಾಮಿನ ರೆಡ್ ನದಿ ಮುಖ್ಯವಾದದ್ದು. ಇದು ಟಾನ್‍ಕಿನ್ ಖಾರಿಯನ್ನು ಸೇರುತ್ತದೆ. ದಕ್ಷಿಣ ವಿಯಟ್ನಾಮಿನಲ್ಲಿ ಹರಿಯುವ ಮೆಕಾಂಗ್‍ನದಿ ಚೀನದಿಂದ ಹರಿದುಬರುತ್ತದೆ. ಇದು ದಕ್ಷಿಣ ಚೀನ ಸಮುದ್ರವನ್ನು ಸೇರುತ್ತದೆ. ಈ ಎರಡೂ ನದಿಗಳು ವಿಯಟ್ನಾಮಿನ ಕೃಷಿ ಚಟುವಟಿಕೆಗೆ ಮುಖ್ಯ ಜಲಪೂರೈಕೆ ಮೂಲಗಳಾಗಿವೆ. ಉಷ್ಣವಲಯದಲ್ಲಿರುವ ವಿಯಟ್ನಾಮಿನ ಹವಾಗುಣ ಇಲ್ಲಿಯ ಕ್ಲುಪ್ತಮಾರುತಗಳಿಂದ ನಿಯಂತ್ರಿಸಲ್ಪಡುತ್ತದೆ. ಬಿರುಗಾಳಿ ಕೂಡಿದ ಮಳೆ ಬೇಸಗೆಯಲ್ಲಿ ಬೀಳುವುದು. ಹಾನಾಯ್‍ನಲ್ಲಿ ವಾರ್ಷಿಕ 183 ಸೆಂಮೀ ಮಳೆ ಬೀಳುತ್ತದೆ. ಬತ್ತ ಇಲ್ಲಿಯ ಮುಖ್ಯಬೆಳೆ. ಅಕ್ಕಿಯ ಬಳಕೆ ಹೆಚ್ಚು. ಕಸಾವ ಎಂಬ ಮರಗೆಣಸು, ಕಾಫಿ, ತೆಂಗು, ಸೆಣಬು, ಹತ್ತಿ, ಸೊಯಾಬೀನ್, ಕಬ್ಬು, ಆಲೂಗೆಡ್ಡೆ, ಟೀ, ಹೊಗೆಸೊಪ್ಪು ಮತ್ತು ರಬ್ಬರ್ ಇವುಗಳನ್ನೂ ಜೊತೆಗೆ ವಿವಿಧ ಧಾನ್ಯಗಳನ್ನೂ ಬೆಳೆಯುತ್ತಾರೆ. ವಿಯಟ್ನಾಮಿನ ಸಮುದ್ರ ತೀರದಲ್ಲಿರುವ ಸಾವಿರಾರು ಮಂದಿ ಮತ್ಯೋದ್ಯಮದಿಂದ ಜೀವನ ಸಾಗಿಸುತ್ತಾರೆ. ವಿವಿಧ ಬಗೆಯ ಮೀನು ಮತ್ತು ಸೀಗಡಿಯ ವ್ಯಾಪಾರ ಇಲ್ಲಿನ ಜನರಿಗೆ ಆರ್ಥಿಕ ಮೂಲವೂ ಆಗಿದೆ. 

	ವಿಯಟ್ನಾಮಿನಲ್ಲಿ ದೊಡ್ಡಕೈಗಾರಿಕೆಗಳಿಗೆ ಬೇಕಾಗುವ ಪ್ರಾಕೃತಿಕ ಸಂಪತ್ತು ಇಲ್ಲವಾಗಿದ್ದು, ಕಬ್ಬಿಣ ಮತ್ತು ಉಕ್ಕಿನ ಚಿಕ್ಕ ಕಾರ್ಖಾನೆಗಳಿವೆ. ಈ ಕಬ್ಬಿಣ, ಉಕ್ಕಿನಿಂದ ವ್ಯವಸಾಯಕ್ಕೆ ಬೇಕಾದ ಉಪಕರಣ, ಬೈಸಿಕಲ್ಲು ಮತ್ತು ಸಣ್ಣಪುಟ್ಟ ನಿತ್ಯೋಪಯೋಗಿ ಯಂತ್ರಗಳ ತಯಾರಿಕೆಗೆ ಬಳಸುತ್ತಾರೆ. ಸಿಮೆಂಟ್, ರಾಸಾಯನಿಕ ಗೊಬ್ಬರ, ಆಹಾರಸಂಸ್ಕರಣೆ, ಕಾಗದ ಮತ್ತು ಜವಳಿ ಕಾರ್ಖಾನೆಗಳಿವೆ. ಪೆಟ್ರೋಲ್ ತೈಲ ಮತ್ತು ಅದರ ಉಪೋತ್ಪನ್ನಗಳು, ಔಷಧ, ಯಂತ್ರೋಪಕರಣಗಳು, ವಿವಿಧ ವಾಹನಗಳು, ಸೈನಿಕರಿಗೆ ಬೇಕಾದ ವಸ್ತುಗಳು ಮತ್ತು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಅಕ್ಕಿ, ರಬ್ಬರು, ಕಚ್ಚಾಪೆಟ್ರೋಲ್, ಟೀ, ಬೊಂಬಿನಿಂದ ತಯಾರಿಸಿದ ಕರಕುಶಲವಸ್ತುಗಳನ್ನು ಹೆಚ್ಚಾಗಿ ರಫ್ತು ಮಾಡುತ್ತಾರೆ. ಜಪಾನ್ ಮತ್ತು ಸಿಂಗಪುರ ಇವರ ಮುಖ್ಯ ಮಾರುಕಟ್ಟೆ ಯಾಗಿವೆ. ರಸ್ತೆ, ರೈಲು, ವಿಮಾನ ಸಂಪರ್ಕಗಳುಂಟು. ನದಿಗಳ ಜಲಮಾರ್ಗವನ್ನೂ ಸಾಕಷ್ಟು ಬಗೆಯಲ್ಲಿ ಬಳಸಿಕೊಳ್ಳುತ್ತಾರೆ. ವಿಯಟ್ನಾಮ್ ಇತಿಹಾಸದ ಉದ್ದಕ್ಕೂ ಪರದೇಶದ ಆಕ್ರಮಣಗಳಿಗೆ ಒಳಗಾಗಿ ದೌರ್ಜನ್ಯ ಎದುರಿಸಿದೆ. ಮೂಲತಃ ಇಲ್ಲಿಯ ನಿವಾಸಿಗಳು ವಿಯಟ್ನಾಮ್ ದೇಶದ ಉತ್ತರ ಭಾಗದಲ್ಲಿ ವಾಸವಾಗಿದ್ದರು. ವಿಯಟ್ನಾಮ್  ದೇಶದಲ್ಲಿ 50 ಪ್ರಾಂತ್ಯಗಳಿವೆ. ಪ್ರಾಂತ್ಯ ಸರ್ಕಾರಗಳನ್ನು ಕಮ್ಯೂನಿಸ್ಟ್ ಪಕ್ಷ ರಚಿಸುತ್ತದೆ. ಗ್ರಾಮವಾರು ಚುನಾಯಿತ ನಾಯಕರು ಪ್ರಾಂತ್ಯಾಡಳಿತದ ನಾಯಕರುಗಳನ್ನು ಚುನಾಯಿಸುತ್ತಾರೆ. ವಿಯಟ್ನಾಮ್‍ನಲ್ಲಿ ಉಚ್ಚನ್ಯಾಯಾಲಯ, ಪ್ರಾಂತ್ಯನ್ಯಾಯಾಲಯ ಹಾಗೂ ಸೇನಾ ನ್ಯಾಯಾಲಯಗಳಿವೆ.

	ವಿಯಟ್ನಾಮಿನ ಅತ್ಯಂತ ಜನನಿಬಿಡ ಪ್ರಥಮ ಮಹಾನಗರ ಹೋಚಿಮಿನ್. ರಾಜಧಾನಿ ಹಾನಾಯ್ ದೇಶದ ಎರಡನೆಯ ಮಹಾನಗರ. ಹೈಪಾಂಗ್ ಮೂರನೆಯ ಮಹಾನಗರವಾಗಿದೆ. ವಿಯಟ್ನಾಮ್ ಯುದ್ಧದ ಕಾರಣಗಳಿಂದಾಗಿ ಶಿಕ್ಷಣದಲ್ಲಿ ತೀವ್ರಗತಿಯ ಅಭಿವೃದ್ಧಿಯಾಗಿಲ್ಲ. ಸರ್ಕಾರವೇ ಪ್ರೌಢಶಾಲೆಯವರೆಗಿನ ಶಿಕ್ಷಣ ನೋಡಿಕೊಳ್ಳುತ್ತಿದೆ. ಹೋಚಿಮಿನ್ ನಗರ ವಿಶ್ವವಿದ್ಯಾಲಯ ಮತ್ತು ಹಾನಾಯ್ ವಿಶ್ವವಿದ್ಯಾಲಯಗಳಿವೆ. ವಿಯಟ್ನಾಮಿಯರು ಕವನಗಳ ಬಗ್ಗೆ ಹೆಚ್ಚುಆಸಕ್ತರು. ಫ್ರೆಂಚರ ಕಾಲದಲ್ಲಿ ಕಾದಂಬರಿ, ಗದ್ಯ ಸಾಹಿತ್ಯ ಜನಪ್ರಿಯವಾದರೂ ಪದ್ಯ ಅತ್ಯಂತ ಪ್ರಿಯ. ಸು.1700 ರಿಂದ 1800ರಲ್ಲಿದ್ದ ಇಲ್ಲಿನ ಜನಪ್ರಿಯ ಕವಿ ಗುಯೆನ್ ಡ್ಯೂ ರಚಿಸಿರುವ ಕಿಮ್ ವ್ಯಾನ್ ಕಿಯು ಎಂಬ ಕವನ ಪ್ರೀತಿ ಮತ್ತು ತ್ಯಾಗಗಳನ್ನು ಕುರಿತದ್ದು. ಇಲ್ಲಿಯ ಜನರ ಬಾಯಲ್ಲಿ ಅದರ ಕೆಲವು ಸಾಲುಗಳನ್ನಾದರೂ ಕೇಳಬಹುದು. ಇಲ್ಲಿಯ ಕಲೆ ಪ್ರಾಚೀನ ಚೀನದ ಮತ್ತು ಆಧುನಿಕ ಫ್ರೆಂಚರ ಪ್ರಭಾವಕ್ಕೆ ಒಳಪಟ್ಟಿದ್ದೆನ್ನಬಹುದು. ಇಲ್ಲಿನ ಪಗೋಡಗಳು (ದೇವಾಲಯಗಳು). ಗೋಪುರಗಳು ಹಾಗೂ ಅರಮನೆಗಳು ವಿಯಟ್ನಾಮಿನ ಪ್ರಾಚೀನ ಕಲಾ ಸಂಪ್ರದಾಯಕ್ಕೆ ಉದಾಹರಣೆಯಂತಿವೆ.

	ಇತಿಹಾಸ: ವಿಯಟ್ನಾಮ್ ಇತಿಹಾಸದುದ್ದಕ್ಕೂ ಪರದೇಶಾಕ್ರಮಣಗಳಿಗೆ ಒಳಗಾಗಿ ದೌರ್ಜನ್ಯ ಎದುರಿಸಿದೆ. ಮೂಲತಃ ಇಲ್ಲಿಯ ನಿವಾಸಿಗಳು ವಿಯಟ್ನಾಮ್ ದೇಶದ ಉತ್ತರಭಾಗದಲ್ಲಿ ವಾಸವಾಗಿದ್ದರು. ಚೀನ ಈ ನಾಡನ್ನು ಕ್ರಿ.ಪೂ. 100ರಲ್ಲಿ ಆಕ್ರಮಿಸಿಕೊಂಡು ಕ್ರಿ.ಶ. 900 ರವರೆಗೂ ಆಳಿಕೆ ನಡೆಸಿತು. 900ರಲ್ಲಿ ವಿಯಟ್ನಾಮ್ ಪ್ರತ್ಯೇಕ ದೇಶವಾಯಿತು. ಅನಂತರದ 900 ವರ್ಷಗಳಲ್ಲಿ ತನ್ನ ಗಡಿಪ್ರದೇಶವನ್ನು ವಿಸ್ತರಿಸುತ್ತಾ ಇಂದಿನ ಭೂಪ್ರದೇಶವನ್ನು ಪಡೆಯಿತು. 1800ರ ಕೊನೆಯ ದಿನಗಳಲ್ಲಿ ಇದು ಫ್ರಾನ್ಸಿನ ಆಕ್ರಮಣಕ್ಕೆ ಒಳಗಾಯಿತು. ಅಂದಿನಿಂದ ಪ್ರಪಂಚದ ಎರಡನೆಯ ಮಹಾಯುದ್ಧದವರೆಗೂ ಇಲ್ಲಿ ಫ್ರಾನ್ಸ್ ಆಳಿತು. ಆ ಯುದ್ಧದಲ್ಲಿ ಜಪಾನ್ ವಿಯಟ್ನಾಮನ್ನು ವಶಪಡಿಸಿಕೊಂಡಿತು. ಯುದ್ಧದಲ್ಲಿ ಜಪಾನ್ ಸೋತು ಶರಣಾಯಿತು. ಫ್ರಾನ್ಸ್ ಮತ್ತೆ ಈ ದೇಶವನ್ನು ಆಳತೊಡಗಿತು. ಹೋ ಚಿ ಮಿನ್ ನೇತೃತ್ವದಲ್ಲಿ ಕ್ರಾಂತಿ ರೂಪುಗೊಂಡಿತು. ವಿಯಟ್ನಾಮ್‍ನ ಉತ್ತರ ಭಾಗವನ್ನು ಕ್ರಾಂತಿಕಾರರು ವಶಕ್ಕೆ ಪಡೆದುಕೊಂಡರು. ಫ್ರಾನ್ಸ್‍ನ ಆಡಳಿತದ ವಿರುದ್ಧ 1946-54ರವರೆಗೂ ಹೋರಾಟ ನಡೆಯಿತು. ಅಂತಿಮವಾಗಿ ಫ್ರಾನ್ಸ್ ಪರಾಭವಗೊಂಡಿತು. 1954ರ ಜಿನೀವ ಶಾಂತಿ ಒಪ್ಪಂದದ ಮೇರೆಗೆ ವಿಯಟ್ನಾಮ್  ದೇಶವನ್ನು ಉತ್ತರ ಹಾಗೂ ದಕ್ಷಿಣ ವಿಯಟ್ನಾಮ್ ಎಂಬ ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಉತ್ತರ ಭಾಗ ಕಮ್ಯೂನಿಸ್ಟ್ ನಾಯಕರ ಕೈವಶವಾದರೆ, ದಕ್ಷಿಣ ಭಾಗದಲ್ಲಿ ಕಮ್ಯೂನಿಸ್ಟೇತರ ಸರ್ಕಾರ ಬಂತು. 1957ರಲ್ಲಿ ದಕ್ಷಿಣ ವಿಯಟ್ನಾಮ್ ಜನರು ದಕ್ಷಿಣ ಪ್ರಾಂತ್ಯದ ಸರ್ಕಾರದ ವಿರುದ್ಧ ಕ್ರಾಂತಿ ಸಮರ ಸಾರಿದರು. ಉತ್ತರ ವಿಯಟ್ನಾಮ್ ಬೆಂಬಲ ಸೂಚಿಸಿತು. ಉತ್ತರ ಹಾಗೂ ದಕ್ಷಿಣ ವಿಯಟ್ನಾಮ್‍ಗಳ ನಡುವೆ ಯುದ್ಧ ನಡೆಯಿತು. ಚೀನ ಮತ್ತು ಸೋವಿಯತ್ ದೇಶಗಳು ಉತ್ತರ ವಿಯಟ್ನಾಮಿಗೆ ಬೆಂಬಲ ನೀಡಿದವು. ದಕ್ಷಿಣ ವಿಯಟ್ನಾಮ್  ಸಹಾಯಕ್ಕೆ ಅಮೆರಿಕದ ಪಡೆಗಳು ಬಂದವು. ಕೊನೆಗೆ 1973ರಲ್ಲಿ ಕದನ ವಿರಾಮವನ್ನು ಘೋಷಿಸಲಾಯಿತು. ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆದುಕೊಂಡಿತು. 1976ರಲ್ಲಿ ಉತ್ತರ ವಿಯಟ್ನಾಮ್ ದಕ್ಷಿಣ ವಿಯಟ್ನಾಮನ್ನು ಸೋಲಿಸಿತು. ಎರಡೂ ಭಾಗಗಳು ಒಂದಾಗಿ ಅಖಂಡ ವಿಯಟ್ನಾಮ್ ಗಣರಾಜ್ಯ ಪುನಃ ಸ್ಥಾಪನೆಯಾಯಿತು.

	ಇಂದಿಗೂ ವಿಯಟ್ನಾಮ್ ಸರ್ಕಾರ ಕಮ್ಯೂನಿಸ್ಟ್ ಪಕ್ಷದ ಆಡಳಿತಕ್ಕೆ ಒಳಪಟ್ಟಿದೆ. ಈ ಪಕ್ಷದಲ್ಲಿ ಹದಿನೈದು ಪಾಲಿಟ್ ಬ್ಯೂರೋ ಸದಸ್ಯರಿದ್ದಾರೆ. ಇವರು ಸರ್ಕಾರದ ಎಲ್ಲ ರೀತಿಯ ಕರಡು ನಿಯಮಗಳನ್ನು ರಚಿಸುತ್ತಾರೆ. ವಿಯಟ್ನಾಮ್ ಸರ್ಕಾರದಲ್ಲಿ ಪಾಲಿಟ್‍ಬ್ಯೂರೊ ಅತ್ಯಂತ ಬಲಿಷ್ಠ. ವಿಯಟ್ನಾಮ್ ಶಾಸನ ಸಭೆಗೆ ಐದು ವರ್ಷಗಳ ಅವಧಿಗೆ ಸದ್ಯಸರು ಚುನಾಯಿತರಾಗುತ್ತಾರೆ. ಅದರ ಅಧಿವೇಶನ ವರ್ಷಕ್ಕೆ ಮೂರು ಬಾರಿ ನಡೆಯುತ್ತದೆ. ಕಮ್ಯೂನಿಸ್ಟ್ ಪಕ್ಷದ ಪಾಲಿಟ್‍ಬ್ಯೂರೋ ರಚಿಸಿದ ನಿಯಮಾವಳಿಗಳನ್ನು ಚರ್ಚಿಸಿ ಅಂಗೀಕಾರ ನೀಡುತ್ತದೆ. ಚುನಾಯಿತ ಸದಸ್ಯರುಗಳಲ್ಲಿ ಒಬ್ಬ ರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಾನೆ. ರಾಷ್ಟ್ರಪತಿಯ ಅಧಿಕಾರಾವಧಿ ಐದು ವರ್ಷ. ಸಭೆಯ ಅನುಮೋದನೆಯ ಮೇರೆಗೆ ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಸರ್ಕಾರದ ಇತರ ಅಧಿಕಾರಿಗಳ ನೇಮಕವಾಗುತ್ತದೆ.							
		(ಎ.ಡಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ